ಅಂತರಂಗದ ಮರು ಹೊಂದಾಣಿಕೆಯ ಸಾಕಾರದಲ್ಲಿ ನಮ್ಮನ್ನು ನಾವು ಕೇಳಿಕೊಳ್ಳಬೇಕಾದ ಸೂಕ್ತ ಪ್ರಶ್ನೆಗಳು
ನನ್ನ ಜೀವನದಲ್ಲಿ ಅನೇಕ ಸಂದರ್ಭಗಳಿವೆ—ವಿಶೇಷವಾಗಿ ನನ್ನ ವೃತ್ತಿಯ ಮಧ್ಯ ಭಾಗದಲ್ಲಿ —ನಾನು ಸಂತೋಷವನ್ನು ಹೊರಗಣ ಪ್ರಪಂಚದಲ್ಲಿ ಹುಡುಕುತ್ತಿದ್ದೆ. ಹೊಸ ಬೈಕು, ಹೊಸ ಕಾರು, ಉತ್ತಮ ಉದ್ಯೋಗ, ಅಥವಾ ನಾನಾ ಸ್ಥಳಗಳಿಗೆ ಪ್ರಯಾಣ ಮಾಡುವುದರಿಂದ ನಾನು ಆ ಸಂತೋಷ ಅನುಭವಿಸುತ್ತೇನೆ ಎಂದು ಅಂದುಕೊಳ್ಳುತ್ತಿದ್ದೆ. ಈಗಲೂ, ನಾನು ‘ಪರಿಪಕ್ವ ಆವಿರ್ಭಾವ’ ದಕಡೆಗೆ ಮುಖ ಮಾಡಿರುವ ಸಂದರ್ಭದಲ್ಲಿರುವಾಗಲೂ, ನನ್ನ ಸುತ್ತಲಿರುವ ಜಗತ್ತನ್ನು ಪುನಃ ರೂಪಿಸುವುದರಿಂದ ಸಂತೋಷವನ್ನು ಪಡೆಯಬಹುದು ಎಂಬ ಭಾವನೆ ಕೆಲವೊಮ್ಮೆ ಮೂಡುತ್ತದೆ.

ನಾವು ಬಹುತೇಕ ಸಂದರ್ಭಗಳಲ್ಲಿ ನಮ್ಮೊಳಗೆ ಸಂಪೂರ್ಣವಾಗಿ ಶಾಶ್ವತ ಸಂತೋಷವನ್ನು ಅನುಭವಿಸುವುದಕ್ಕೆ ಸಾಧ್ಯವಾಗುತ್ತಿಲ್ಲ, ಅಲ್ಲವೆ? ಅನೇಕ ಸಂದರ್ಭಗಳಲ್ಲಿ, ನಾವು ನಮ್ಮೊಳಗೆ ಹೀಗೆ ಹೇಳಿಕೊಳ್ಳುತ್ತೇವೆ: "ಈ ಕಾರ್ಯವನ್ನು ಅಥವಾ ಆ ಕೆಲಸವನ್ನು ಮಾಡಿದ ನಂತರ ನನಗೆ ಸಂತೋಷ ಸಿಗುತ್ತದೆ" ಎಂದು ನಂಬಿರುತ್ತೇವೆ... ಆದರೆ ನಾವು ಆಳವಾಗಿ ನಮ್ಮನ್ನು ನಾವು ಪ್ರಶ್ನಿಸಿಕೊಳ್ಳಬೇಕಾದ ವಿಚಾರ ಏನೆಂದರೆ:
"ನನಗೇಕೆ ನನ್ನೊಳಗೆ ಸಂತೋಷವಾಗಿ ಇರುವುದಕ್ಕೆ ಆಗುತ್ತಿಲ್ಲ? ನನ್ನೊಳಗೆ ಏನನ್ನು ಮರುಹೊಂದಾಣಿಕೆ ಮಾಡಿಕೊಳ್ಳಬೇಕು?" ಬಹುಷಃ ಈ ಪ್ರಶ್ನೆಯೇ ಶಾಶ್ವತ ಸಂತೋಷದ ಅನುಭವಕ್ಕಾಗಿ ಮೊದಲ ಹೆಜ್ಜೆಯಾಗುತ್ತದೆ. ಅದರ ಬದಲು ನಮ್ಮ ಒಳಗಣ ನಂಬಿಕೆ ಮತ್ತು ಅನುಕೂಲಕ್ಕೆ ತಕ್ಕಂತೆ ನಾನು ಹೊರಗಿನ ಪ್ರಪಂಚ ಇಲ್ಲವಲ್ಲ ಎಂಬ ಭಾವನೆಯಿಂದ ಯಾವಾಗಲೂ ಹೊರಗಿನ ಪ್ರಪಂಚವನ್ನು ಹೇಗೆ ಮರು ಹೊಂದಿಸುವುದು ಹೇಗೆ ಎಂಬ ಪ್ರಶ್ನೆಗಳನ್ನು ನಮ್ಮ ಜೀವನದ ಪ್ರತಿ ಘಟ್ಟಗಳಲ್ಲಿ ಕೇಳಿಕೊಂಡು ಅದನ್ನೇ ನಮ್ಮ ಜೀವನದ ಮೂಲ ಉದ್ದೇಶವಾಗಿ ಮಾಡಿಕೊಂಡು ಜೀವನದಲ್ಲಿ ಶಾಶ್ವತ ಸಂತೋಷಕ್ಕಾಗಿ ಹೆಣಗುತ್ತಿದ್ದೇವೆ. ಎಂದನಿಸುವುದಿಲ್ಲವೇ?
ಇದು ನನಗೆ ಒಂದು ಹಾಸ್ಯಾಸ್ಪದ ಕತೆಯನ್ನು ನೆನಪಿಗೆ ತರುತ್ತದೆ. ಒಂದು ರಾತ್ರಿ ಒಬ್ಬ ವ್ಯಕ್ತಿ ತನ್ನ ಕಳೆದು ಹೋದ ನಾಣ್ಯವನ್ನು ಮನೆ ಒಳಗೆ ಕಳೆದುಕೊಂಡಿದ್ದನು, ಆದರೆ ಅದು ಹತ್ತಿರದ ಬೀದಿಯ ಬೆಳಕಿನಲ್ಲಿ ಹುಡುಕುತ್ತಿದ್ದ. ಆ ರಾತ್ರಿ, ಅಲ್ಲಿಯೇ ಹಾದುಹೋಗುತ್ತಿದ ಮನುಷ್ಯ ಕುತೂಹಲದಿಂದ ನೋಡಿ ಕೇಳಿದನು: "ನೀನು ಏನನ್ನು ಹುಡುಕುತ್ತಿದ್ದೀಯ?"
"ನನ್ನ ಕಳೆದುಹೋದ ನಾಣ್ಯವನ್ನು," ಎಂದು ಅವನು ಉತ್ತರಿಸಿದನು.
"ನೀನು ಅದನ್ನು ಎಲ್ಲಿ ಕಳೆದುಕೊಂಡೆ?" ಎಂದು ದಾರಿಹೋಕನು ಕೇಳಿದನು
"ನನ್ನ ಕೋಣೆಯೊಳಗೆ ಕಳೆದುಕೊಂಡೆ," ಎಂದು ಆತ ಖಚಿತವಾಗಿ ಹೇಳಿದ
"ಹಾಗಾದರೆ ನೀನು ಇಲ್ಲಿ ಏಕೆ ಹುಡುಕುತ್ತಿದ್ದೀಯ?" ಎಂದು ದಾರಿಹೋಕನು ಕೇಳಿದ.
"ಏಕೆಂದರೆ ಇಲ್ಲಿ ಹೆಚ್ಚು ಬೆಳಕು ಇದೆ," ಎಂದು ಆತ ಉತ್ತರಿಸಿದನು.
ಈ ಘಟನೆ ಕೇಳಲು ಹಾಸ್ಯಾಸ್ಪದವಾದರೂ, ಅದೆಷ್ಟೋ ಸಲ ನಾವು ಹೀಗೆಯೇ ಮಾಡುತ್ತಿದ್ದೇವೆ, ಎಂದನಿಸುವುದಿಲ್ಲವೇ? ಸಂತೋಷವನ್ನು ಹುಡುಕುವಾಗ, ನಾವು ಅದನ್ನು ನಮ್ಮ ಒಳಗಿನ ಅಂತರಾತ್ಮದಲ್ಲಿ ಕಳೆದುಕೊಂಡಿದ್ದೇವೆ, ಆದರೆ ಅದನ್ನು ಹೊರಗಿನ ಬೆಳಕಿನಲ್ಲಿ ಹುಡುಕುತ್ತಿರುತ್ತೇವೆ, ಏಕೆಂದರೆ ಅಲ್ಲಿ ಸುಲಭವಾಗಿ ಬೆಳಕಿನ ಅಡಿ ಹುಡುಕಿದರೆ ಸಿಗಬಹುದು ಎಂಬದು ನಮ್ಮ ನಂಬಿಕೆ. ಆದರೆ ಸತ್ಯ ಏನೆಂದರೆ, ಶಾಶ್ವತವಾದ ಸುಖ ಶಾಂತಿಯು ಹೊರಗಿನ ಐಶ್ವರ್ಯ, ಸ್ಥಾನಮಾನ ಅಥವಾ ಮಾನ್ಯತೆಯ ಬೆಳಕಿನಲ್ಲಿ ಅನುಭವಿಸುವ ಭಾವವಲ್ಲ. ಅದು ನಮ್ಮ ಒಳಗಿನ ಆಳದಲ್ಲಿ ಇದೆ. ತಾತ್ಕಾಲಿಕವಾಗಿ ನಾವು ಹೊರಗಿನ ಪ್ರಾಪಂಚಿಕ ಸಾಧನೆಗಳ ಮೂಲಕ ಕ್ಷಣಿಕ ಸಂತೋಷವನ್ನು ಅನುಭವಿಸುತ್ತೇವೆ, ಆದರೆ ಶಾಶ್ವತ ಸಂತೋಷ ಅಲ್ಲಿ ಸಿಗುವಂತಹುದ್ದಲ್ಲ.
ನಿಜವಾದ ಶಾಶ್ವತ ಸಂತೋಷ ಮತ್ತು ತೃಪ್ತಿ ಅನುಭವಿಸಲು, ನಾವು ನಿಜವಾಗಿಯೂ ಆಳವಾದ ಪ್ರಶ್ನೆಗಳನ್ನು ನಮ್ಮೊಳಗೆ ಕೇಳಿದಾಗಲೇ ಸಾಧ್ಯವಾಗುತ್ತದೆ. ಇದು ಹೊರಗಿನ ಪ್ರಪಂಚವನ್ನು ನಿರಂತರವಾಗಿ ಸರಿಪಡಿಸುವುದರಿಂದ ಸಾಧ್ಯವಾಗುವಂತಹುದಲ್ಲ, ಆದರೆ ನಮ್ಮ ನೈತಿಕತೆ, ಮೌಲ್ಯ ಮತ್ತು ಜೀವನದ ಉದ್ದೇಶಗಳನ್ನು ಅರ್ಥಮಾಡಿಕೊಂಡು ಒಳಗಡೆ ಮರು-ಹೊಂದಾಣಿಕೆ ಸಾಧಿಸುವುದರಿಂದ ದೊರೆಯುತ್ತದೆ.
ಇದು ಜ್ವರಕ್ಕೆ ಔಷಧಿ ಕೊಡದೇ ಕೊಠಡಿಯ ತಾಪಮಾನವನ್ನು ಬದಲಾಯಿಸುವಂತೆ ಆಗುತ್ತದೆ. ಅಲ್ಲಿ ತಾತ್ಕಾಲಿಕವಾಗಿ ಸಂತೋಷ ಎನ್ನುವುದು ಅನುಭವಕ್ಕೆ ಬಂದರೂ, ಸಮಸ್ಯೆಯ ಮೂಲಕ್ಕೆ ನಾವು ಹೋಗಿಲ್ಲ. ಆದರೆ ಶಾಶ್ವತ ತೃಪ್ತಿ ಮತ್ತು ಸಂತೋಷವನ್ನು ಹೊಂದಲು, ನಾವು ನಮ್ಮೊಳಗಿನ ಮೂಲವನ್ನು ಸಮರ್ಥವಾಗಿ ಮರುಹೊಂದಾಣಿಕೆ ಮಾಡಬೇಕಾಗುತ್ತದೆ.
ನಾನು ಕೂಡ ಇಂತಹುದೇ ಯಾತ್ರೆಯಲ್ಲಿದ್ದೇನೆ—ಸಣ್ಣ ಸಣ್ಣ ಹೆಜ್ಜೆಗಳನ್ನು ಇಟ್ಟು, ನಿಧಾನವಾಗಿ, ಒಂದು ಹಂತದಿಂದ ಮತ್ತೊಂದು ಹಂತಕ್ಕೆ ಸಾಗುತ್ತಿದ್ದೇನೆ. ನಾನು ಹೆಚ್ಚು ಒಳಗಡೆ ತಿರುಗಿದಂತೆ, ನನಗೆ ಶಾಶ್ವತ ಸಂತೋಷ ಮತ್ತು ತೃಪ್ತಿಯನ್ನು ಕೊಡುವುದು ಯಾವುದು ಎಂಬುದರ ಬಗ್ಗೆ ಸ್ಪಷ್ಟತೆ ಬರುತ್ತಿದೆ. ನೀವು ಕೂಡ ಈ ಆಂತರಿಕ ಯಾತ್ರೆಯನ್ನು ಪರಿಶೀಲಿಸಲು ಕುತೂಹಲ ಹೊಂದಿದ್ದರೆ, ಅಥವಾ ಇದು ನಿಮ್ಮ ಮನಸ್ಸಿನಲ್ಲಿ ತಡಕಾಡುತ್ತಿದ್ದರೆ, ನಿಮ್ಮೊಂದಿಗೆ ಹಂಚಿಕೊಳ್ಳಲು ಅಥವಾ ನಿಮ್ಮಿಂದ ಕಲಿಯಲು ಮತ್ತು ಅದರಿಂದ ನಾನು ಸದುಪಯೋಗ ಪಡೆಯಲು ಸಿದ್ದನಿದ್ದೇನೆ. ಬನ್ನಿ ಜೊತೆಗೆ ಕಲಿಯೋಣ.
#ಆಂತರಿಕವೃದ್ಧಿ #ವೈಯಕ್ತಿಕವಿಕಾಸ #ಆತ್ಮಾವಲೋಕನ #ಮಾನಸಿಕಆರೋಗ್ಯ #ಜೀವನದಅರ್ಥ #ಆಧ್ಯಾತ್ಮಿಕವಿಕಾಸ #ಆತ್ಮಸಾಕ್ಷಾತ್ಕಾರ #ನೀತಿಮೂಲ್ಯಗಳಆಧಾರಿತಜೀವನ