ಎಲ್ಲೋ ಯಾತ್ರೆಯ ಹಾದಿಯಲ್ಲಿ ನನ್ನನ್ನು ನಾನು ಕಳೆದುಕೊಂಡಂತೆ ...
ಪ್ರತಿ ವರ್ಷದಂತೆ ಈ ಬಾರಿಯೂ ಸಹ, ಕಳೆದ ವಾರ ತಿರುಪತಿಯ ಕಡೆ ಪಾದ ಯಾತ್ರೆ ಕೈಗೊಂಡೆ. ಅದೇ ದಾರಿ — ನಗರದ ಜಂಜಾಟ, ಗದ್ದಲಗಳಿಂದ ತಿರುಪತಿಯ ಪವಿತ್ರ ಬೆಟ್ಟದ ಕಡೆಗೆ. ಆದರೆ ಪ್ರತೀ ಬಾರಿ ಪಾದಯಾತ್ರೆ ಒಂದೇ ರೀತಿ ಇರುವುದಿಲ್ಲ ಯಾವಾಗಲೂ ಹೊಸ ಅನುಭವ ಕೊಡುತ್ತದೆ.

ಹೌದು! ಹೊರಗಿನ ದಾರಿ ಪ್ರತಿ ಸಲದಂತೆ ಹಳೆಯದೇ ಆಗಿರುತ್ತದೆ . ಆದರೆ ಒಳಗಿನ ದಾರಿಮಾತ್ರ? ಪ್ರತೀ ಸಲ ಹೊಸತು.
ಯಾತ್ರೆಯ ಆರಂಭದಲ್ಲಿ ಶಕ್ತಿಯಿರುತ್ತದೆ. ದೇಹ ಉತ್ಸಾಹದಿಂದ ಹೆಜ್ಜೆ ಇಡುತ್ತದೆ. ಮನಸ್ಸು ಜಗತ್ತಿನ ಚಿಂತೆಗಳಲ್ಲಿ ತೊಡಗಿರುತ್ತದೆ — ಮನೆಮಾತು, ಕೆಲಸದ ಬಿಕ್ಕಟ್ಟು, ದಿನನಿತ್ಯದ ಓಡಾಟದ ಶಬ್ದಗಳು.
ಆದರೆ ಹೆಜ್ಜೆಗಳು ಮುಂದೆ ಸಾಗುತ್ತಾ ಹೋದಂತೆ, ಬೇರೆಯದೇ ಬಗೆಯ ತಳಮಳ ಮೇಲೇಳುತ್ತದೆ. ಕಾಲು ನೋವು ಹೆಚ್ಚಾಗುತ್ತಾ ಹೋಗುತ್ತದೆ, ದೇಹ ಕಂಗೆಟ್ಟಂತೆ ಅನ್ನಿಸುತ್ತೆ. ಹೊರಗಿನ ಯಾವುದೇ ಪ್ರೇರಣೆಗಳು ದೇಹದ ಆಯಾಸದ ಮುಂದೆ ಇನ್ನು ಕೆಲಸಕ್ಕೆ ಬಾರದಂತೆ ಅನಿಸುತ್ತದೆ. ದೇಹ ಮನಸ್ಸು ಒಳಗೆ ಜಾರುತ್ತದೆ, ತನ್ನ ಅಂತರಂಗದ ದನಿಯನ್ನು ಕೇಳಿಸಿಕೊಳ್ಳಲು ಶುರು ಮಾಡುತ್ತದೆ. ಎಲ್ಲೋ ಮನದ ಒಳಗೆ ಯಾವಾಗಲೂ ಇದ್ದ ನಿಶ್ಯಬ್ದ ನಿಧಾನವಾಗಿ ಜಾಗೃತಿಯಾಗತೊಡಗುತ್ತದೆ.
ಮಾತು ಕಡಿಮೆಯಾಗುತ್ತದೆ. ನಾನು ನಿಶ್ಯಬ್ದವನ್ನು ಬಲವಂತವಾಗಿ ಆಯ್ಕೆ ಮಾಡಿಕೊಂಡಂತೆ ಅಲ್ಲ. ನಿಶ್ಯಬ್ದತೆಯೇ ನನ್ನನ್ನು ಆವರಿಸಿಕೊಳ್ಳುತ್ತಿರುವಂತೆ ಅನ್ನಿಸುತ್ತದೆ.
ಮನಸ್ಸಿನ ಗತಿ ನಿಧಾನವಾಗುತ್ತೆ. ಅಂತರಂಗದಲ್ಲಿ ಪ್ರಶ್ನೆಗಳು ತಲೆ ಎತ್ತುತ್ತವೆ —
"ನಾನು ನಿಜವಾಗಿಯೂ ಎತ್ತ ಕಡೆ ಸಾಗುತ್ತಾ ಇದ್ದೀನಿ?" "ಇನ್ನೂ ಬೇಕಾದ, ಬೇಡದ ಎಷ್ಟು ವಿಷಯಗಳನ್ನು ಹೊತ್ತುಕೊಂಡು ಹೋಗುತ್ತಾ ಇದ್ದೀನಿ?" "ಇನ್ನೂ ಏನೇನನ್ನು ಬಿಡಲಾಗದೆ ಹೊತ್ತುಕೊಂಡಿದ್ದೀನಿ?"
ಏನೂ ಕಾರಣವಿಲ್ಲದೆ ಕಣ್ಣಂಚಿನಲ್ಲಿ ನೀರು ಜಿನುಗುತ್ತದೆ. ಅದು ಖಂಡಿತ ದೇಹದ ನೋವಲ್ಲ, ಅಂತರಂಗದ ನೋವು. ಅದು ಬಿಡುಗಡೆಯಂತಲೂ ಆಗಿರಬಹುದು. ಅಥವಾ ಎಲ್ಲೋ ಆಳದಲ್ಲಿ ಅವಿತಿದ್ದ ನೋವು ಸಡಿಲವಾಗುತ್ತಿರಬಹುದು.
ಬೆಟ್ಟದ ಮೆಟ್ಟಿಲುಗಳ ಮೇಲೆ ಕಾಲಿಡೋದಕ್ಕೆ ಶುರು ಮಾಡಿದಾಗ, ಸ್ಪಷ್ಟವಾಗುತ್ತೆ — ನಾನು ಏನೇನೂ ಅಲ್ಲ. ನನ್ನ ಶಕ್ತಿ ಕುಗ್ಗಿರುತ್ತೆ. ದೇಹ ಬುದ್ಧಿಯ ಮಾತು ಕೇಳಲು ಸಿದ್ಧವಿರುವುದಿಲ್ಲ. ಮನಸ್ಸು ತುಂಡಾಗಿರುವಂತೆ ಅನ್ನಿಸಲು ಶುರುವಾಗಿರುತ್ತೆ. ಅಲ್ಲಿಂದ ಮುಂದೆ, ನನಗೆ ಬೇರೇನೂ ಅನುಭವಕ್ಕೆ ಬರುವುದಿಲ್ಲ —
ಶರಣಾಗತಿಯೊಂದನ್ನು ಬಿಟ್ಟು.
ಅದು ಈ ಬೆಟ್ಟಕ್ಕೆ ಅಲ್ಲ. ಈ ಯಾತ್ರೆಗೂ ಅಲ್ಲ. ಆ ಮಹೋನ್ನತ ಶಕ್ತಿಗೆ — ಯಾವಾಗಲೂ ಪಕ್ಕದಲ್ಲೇ ಇದ್ದುಕೊಂಡು, ನನ್ನ ಜೊತೆ ಹೆಜ್ಜೆಗೆ ಹೆಜ್ಜೆ ಹಾಕಿದ ಆ ಶಕ್ತಿಗೆ.
ಅದಕ್ಕೆ ಶರಣಾದಾಗ, ಒಂದು ಅಲೌಕಿಕ ಕಾಲಾತೀತವಾದ ಶಾಂತಿಯ ಅನುಭಾವ ಉಂಟಾಗುತ್ತದೆ. ಅದು ಸದ್ದು ಮಾಡುವಂತಹುದಲ್ಲ. ಅದು ಹೊಂಬೆಳಕಿನಂತೆ – ಮೌನವಾಗಿರುವ ದೈವಿಕ ಸಾನಿಧ್ಯ. ದೇವರು ದೇವಾಲಯದಲ್ಲಿ ಎಂದೂ ಕಾಯುತ್ತಿಲ್ಲ ಅನ್ನಿಸುತ್ತೆ – ದೇವರು ನನ್ನ ಜೊತೆನೇ ಸಾಗ್ತಾ ಇದ್ದಾನೆ, ಉಸಿರಿನಲ್ಲಿ ಉಸಿರಿನಂತೆ, ಹೆಜ್ಜೆಯ ಜೊತೆ ಹೆಜ್ಜೆಯಂತೆ.
ಹಾಗೆಯೇ ಸಾಗುತ್ತಿದ್ದಂತೆ, ಕೊನೆಯಲ್ಲಿ ಒಂದು ಹೊತ್ತಿಗೆ ನಾನು ನಡಿಯುತ್ತಿರುವ ಯಾತ್ರಿಕನಾಗಿರುವುದಿಲ್ಲ... ನಡಿಗೆಯೇ ಆಗಿಬಿಟ್ಟಿರುತ್ತೇನೆ!!
#SpiritualJourney #InnerTransformation #Padayatra #Minimalism #MindfulLiving #SanatanaDharma

