ನಮ್ಮ ಕಥೆಗಳು ನಮ್ಮ ಜೊತೆಯೇ ಸಾಯಬಾರದು: ಭೀಷ್ಮರಿಂದ ಕಲಿತ ಸ್ಫೂರ್ತಿದಾಯಕ ಕಥೆ
ನಾನು ಬರೆಯಬೇಕೆಂದು ಹೆಬ್ಬಯಕೆ ಎಂದೂ ಇರಲಿಲ್ಲ. ನನ್ನ ಬದುಕಿನಲ್ಲಿ ಏನೆಲ್ಲಾ ಸಂಭವಿಸಿತೋ, ಅದನ್ನೆಲ್ಲ ಮೌನವಾಗಿ ನನ್ನೊಳಗೆ ಇಟ್ಟುಕೊಂಡಿದ್ದೆ. ಹಂಚಿಕೊಳ್ಳುವ ಮನಸ್ಸೇ ಆಗಿರಲಿಲ್ಲ. ಆದರೆ ಬದುಕು ತನ್ನದೇ ರೀತಿಯಲ್ಲಿ ಕಠಿಣ ಪಾಠಗಳನ್ನು ಕಲಿಸಿತು. ನೋವು, ನಿರಾಶೆ, ಸಂಶಯ — ಎಲ್ಲವೂ ನನ್ನ ಹಾದಿಯಲ್ಲಿ ಹರಡಿಕೊಂಡಿತ್ತು. ಮೊದಲು ಅವನ್ನು ನಾನು ಭಾರವೆಂದುಕೊಂಡೆ. ಆದರೆ ಆ ನೋವುಗಳಲ್ಲೇ ಜ್ಞಾನವೂ ಇತ್ತು, ಆ ಅನುಭವಗಳಲ್ಲೇ ಆಳವಾದ ಅರ್ಥ ಅಡಗಿದೆ ಎಂಬುದನ್ನು ನಿಧಾನವಾಗಿ ಅರಿತುಕೊಳ್ಳಲು ಆರಂಭಿಸಿದೆ.
ಇದೆಲ್ಲವೂ ಶುರುವಾದದ್ದು — ಕನ್ನಡದ ಮಹಾನ್ ಪಂಡಿತರು, ಶ್ರೀ ಬನ್ನಂಜೆ ಗೋವಿಂದಾಚಾರ್ಯರ ಪ್ರವಚನದಲ್ಲಿ ನಾನು ಕೇಳಿದ ಒಂದು ಆಳವಾದ ಕಥೆಯಿಂದ.
ಅದು ಮಹಾಭಾರತದ ಕುರುಕ್ಷೇತ್ರ ಯುದ್ಧದ ನಂತರದ ಕಥೆ. ಯುದ್ಧ ಮುಗಿದಿತ್ತು. ಅನೇಕ ನೋವು, ರಕ್ತ, ಕಣ್ಣೀರುಗಳ ನಡುವೆ ಪಾಂಡವರು ಕೊನೆಗೂ ಸಿಂಹಾಸನವನ್ನೇರಿದ್ದರು. ಧರ್ಮರಾಜನು ರಾಜನಾಗಿ ತನ್ನ ಸಹೋದರರ ಬುದ್ಧಿಶಕ್ತಿಯಿಂದ ಹಾಗೂ ನಿಷ್ಠೆಯಿಂದ ದೇಶವನ್ನು ಮುನ್ನಡೆಸುತ್ತಿದ್ದ. ರಾಷ್ಟ್ರ ಮತ್ತೆ ಚೇತರಿಸಿಕೊಳ್ಳುತ್ತಿತ್ತು. ವರ್ಷಗಳ ಭೀತಿಯ ನಂತರ ಜನರು ನಿಧಾನವಾಗಿ ನೆಮ್ಮದಿ ಕಂಡು ಬದುಕನ್ನು ಕಟ್ಟಿಕೊಳ್ಳಲು ಪ್ರಾರಂಭಿಸಿದ್ದರು.
ಆದರೆ, ಈ ಶಾಂತಿಯ ನಡುವೆ ಎಲ್ಲೋ ದೂರದ ರಣಾಂಗಣದಲ್ಲಿ , ಬಾಣಗಳ ಹಾಸಿಗೆಯ ಮೇಲೆ ಮಲಗಿದ್ದ ಒಬ್ಬ ವೃದ್ಧ ವೀರನ ಕಣ್ಣುಗಳಲ್ಲಿ ಜೀವ ಇನ್ನೂ ಹೊತ್ತಿ ಉರಿಯುತ್ತಿತ್ತು. ಅವರೇ ಪಿತಾಮಹ ಭೀಷ್ಮ. "ಇಚ್ಛಾಮರಣ" ಎಂಬ ವರವನ್ನು ಹೊಂದಿದ್ದ ಅವರು, ಉತ್ತರಾಯಣ ಪುಣ್ಯಕಾಲದವರೆಗೆ ಈ ಲೋಕವನ್ನು ತ್ಯಜಿಸದೆ ಇರಲು ನಿರ್ಧರಿಸಿದ್ದರು. ಅವರ ದೇಹ ನೂರಾರು ಬಾಣಗಳಿಂದ ಛಿದ್ರವಾಗಿದ್ದರೂ, ಮನಸ್ಸು ಮಾತ್ರ ಅಚಲ — ಸಂಪೂರ್ಣವಾಗಿ ಶ್ರೀಕೃಷ್ಣನ ಧ್ಯಾನದಲ್ಲಿ ನೆಲೆಸಿತ್ತು.
ಒಂದು ದಿನ ಪಾಂಡವರು ಅರಮನೆಯಲ್ಲಿ ಸಂತೋಷ-ಸಂಭ್ರಮದಲ್ಲಿ ಮುಳುಗಿದ್ದಾಗ, ಶ್ರೀಕೃಷ್ಣನು ಮೌನದಿಂದ ದೂರ ನಿಂತಿದ್ದ. ಅವನ ಮುಖದಲ್ಲಿ ಒಂದು ಗಂಭೀರ ಆತಂಕ ಮತ್ತು ಕಳವಳ. ಪಾಂಡವರು ಬೆರಗಾದರು. ಹತ್ತಿರ ಬಂದು ಕೇಳಿದರು: “ಕೃಷ್ಣಾ, ನೀನು ಏಕೆ ನಮ್ಮ ಸಂತೋಷದ ಈ ವೇಳೆಯಲ್ಲಿ ನಮ್ಮ ಜೊತೆ ಪಾಲ್ಗೊಳ್ಳುತ್ತಿಲ್ಲ? ನಿನ್ನ ಹೃದಯವನ್ನು ಯಾವುದೋ ಕಳವಳ ಆವರಿಸಿದಂತೆ ಇದೆ, ಏನದು?”
ಕೃಷ್ಣನು ಆಳವಾಗಿ ನಿಟ್ಟುಸಿರೆಳೆದ.
ಬಹಳ ಹೊತ್ತು ಮೌನವಾಗಿ ನಿಂತು, ಕೊನೆಗೂ ನಿಧಾನವಾಗಿ ಹೇಳಲು ತೊಡಗಿದನು.
ಒಂದು ಪ್ರಖಾಂಡ ಜ್ಞಾನಸಾಗರ ತನ್ನ ಕೊನೆಯ ದಿನಗಳನ್ನು ಎಣಿಸುತ್ತಿರುವುದನ್ನು ಕಣ್ಣ ಮುಂದೆ ಕಾಣುತ್ತಿದ್ದೇನೆ...
ಪಾಂಡವರು ಮತ್ತೂ ಬೆರಗಾದರು. ಪಾಂಡವರು ಪರಸ್ಪರ ಒಬ್ಬರ ಮುಖ ಒಬ್ಬರು ನೋಡಿಕೊಳ್ಳತೊಡಗಿದರು, ಶ್ರೀ ಕೃಷ್ಣನ ಒಳ ಮಾತಿನ ಅರ್ಥ ಅವರಿಗೆ ಹೊಳೆಯಲಿಲ್ಲ.
ಶ್ರೀಕೃಷ್ಣನು ಸ್ಪಷ್ಟಪಡಿಸಿದನು: “ನಿಮ್ಮ ಪಿತಾಮಹ ಭೀಷ್ಮರು — ಆಡಳಿತ, ಧರ್ಮ ಮತ್ತು ಆಧ್ಯಾತ್ಮಿಕತೆಯ ಅಪಾರ ಜ್ಞಾನವನ್ನು ತನ್ನೊಳಗೆ ಹೊತ್ತಿದ್ದಾರೆ. ಆದರೆ ಅವರು ಅದನ್ನು ಹಂಚದೆ ಹಾಗೆಯೇ ಪ್ರಾಣ ತ್ಯಾಗ ಮಾಡಿದರೆ, ಅದು ಮಾನವಕುಲಕ್ಕೆ ಅಳಿಸಲಾಗದ ನಷ್ಟ. ಅನೇಕ ಪೀಳಿಗೆಗಳು ಅವರ ಜ್ಞಾನವಿಲ್ಲದೆ ಬಡವಾಗಿಬಿಡುತ್ತವೆ.”
ಈ ಮಾತುಗಳನ್ನು ಕೇಳಿದ ಪಾಂಡವರ ಹೃದಯ ಪಿತಮಹರ ಬಗ್ಗೆ ಗೌರವದಿಂದ, ಅಂತರಂಗದಲ್ಲಿ ಹುದುಗಿದ್ದ ಪಾಪಪ್ರಜ್ಞೆ ಹೆಚ್ಚಾಯಿತು. ಏಕೆಂದರೆ ಅವರೇ ಯುದ್ಧದಲ್ಲಿ ಭೀಷ್ಮರನ್ನು ಬಾಣಗಳಿಂದ ಘಾಸಿಗೊಳಿಸಿ ಅಲ್ಲಿ ಅದರ ಮೇಲೆ ಅವರನ್ನು ಮಲಗಿಸಿದ್ದರು. ಅವರ ಹತ್ತಿರ ಹೋಗುವುದು ಅವರಿಗೆ ಅಸಹನೀಯವಾಗಿ ಭಾಸವಾಯಿತು.
ಅವರ ಹೃದಯದ ಆ ಭಾವನೆಯನ್ನು ಅರ್ಥ ಮಾಡಿಕೊಂಡ, ಶ್ರೀಕೃಷ್ಣನು ಸಾಂತ್ವನದಿಂದ ಹೇಳಿದನು:
ನಾನು ನಿಮ್ಮ ಹಿಂಜರಿಕೆ ಅರ್ಥಮಾಡಿಕೊಳ್ಳಬಲ್ಲೆ. ಆದರೆ ಪಾಪ ಪ್ರಜ್ಞೆಯ ಭಾವದಿಂದ ಹಿಂದೆ ಸರಿಯುವ ಕಾಲ ಇದಲ್ಲ. ಭೀಷ್ಮನ ಬಳಿ ಇರುವ ಪ್ರಖಾಂಡ ಅನುಭವ ಮತ್ತು ಜ್ಞಾನ, ಕೇವಲ ಅವರದಲ್ಲ — ಅದರಿಂದ ಜಗತ್ತಿಗೇ ಒಳಿತಾಗಬೇಕು. ಅವರ ಮಕ್ಕಳು, ಅವನ ತಲೆಮಾರಿನವರಾದ ನೀವು, ಅದನ್ನು ಸ್ವೀಕರಿಸಬೇಕು, ಮತ್ತು ಮುಂದುವರೆಸಿಕೊಂಡು ಹೋಗಬೇಕು. ಬನ್ನಿ, ನಾನು ನಿಮ್ಮನ್ನು ಅವರ ಬಳಿಗೆ ಕರೆದುಕೊಂಡು ಹೋಗುತ್ತೇನೆ.
ಹಿಂಜರಿಕೆಯಿಂದಲೇ ತಲೆತಗ್ಗಿಸಿಕೊಂಡು, ಪಾಂಡವರು ಶ್ರೀಕೃಷ್ಣನನ್ನು ಹಿಂಬಾಲಿಸದರು.
ಭೀಷ್ಮರು ಕಣ್ಣು ತೆರೆದಾಗ ಮೊದಲು ಕಂಡದ್ದು ತನ್ನ ಆರಾಧ್ಯ ಶ್ರೀಕೃಷ್ಣ. ಆ ಕ್ಷಣದಲ್ಲಿ ಹೃದಯದಲ್ಲಿ ಸಂತೋಷ ಮತ್ತು ಭಕ್ತಿಯ ಅಲೆ ಹರಿಯಿತು. ನಂತರ ಕೃಷ್ಣನ ಹಿಂದೆ ತನ್ನ ಮೊಮ್ಮಕ್ಕಳಾದ ಪಾಂಡವರನ್ನು ಕಂಡು, ಅಭಿಮಾನದಿಂದ ಅವರ ಕಣ್ಣು ತೇವಗೊಂಡವು.
ಶ್ರೀಕೃಷ್ಣನು ಉದ್ದೇಶವನ್ನು ವಿವರಿಸಿದಾಗ, ಕಂಪಿಸಿದ ಶಬ್ದದಲ್ಲಿ ಭೀಷ್ಮರು ಹೇಳಿದರು: “ಕೃಷ್ಣಾ, ನೀನು ನನ್ನ ತಮಾಷೆ ಮಾಡುತ್ತಿಲ್ಲ ತಾನೆ? ನನ್ನ ದೇಹ ನಾಶವಾಗಿದೆ, ಮಾತುಗಳು ಜಾರಿ ಹೋಗುತ್ತಿವೆ, ಬಾಯಿ ತೊದಲುತ್ತಿದೆ, ಸ್ಮರಣೆ ಕ್ಷೀಣಿಸುತ್ತಿದೆ. ಇಂಥ ಸ್ಥಿತಿಯಲ್ಲಿ ನಾನು ಯಾವ ಜ್ಞಾನವನ್ನು ಹಂಚಲಿ? ಒಡೆದ ಪಾತ್ರೆಯಂತಹ ಈ ದೇಹದಲ್ಲಿ ಏನು ತಾನೇ ಉಳಿದಿದೆ?”
ಶ್ರೀಕೃಷ್ಣನು ಹತ್ತಿರ ಬಂದು ಕರುಣೆಯ ದನಿಯಿಂದ ನುಡಿದನು:
"ಭೀಷ್ಮ, ನಿನ್ನ ಈ ದೇಹದ ಬಗ್ಗೆ ಚಿಂತೆ ಬೇಡ. ನಿನ್ನ ತೊದಲುವ ನುಡಿಯ ಬಗ್ಗೆ ಚಿಂತೆ ಬೇಡ. ನಾನು ನಿನ್ನೊಳಗೆ ಕುಳಿತು ಚೈತನ್ಯ ತುಂಬುತ್ತೇನೆ. ನಿನ್ನ ಮೂಲಕ ವಾಕ್ಪ್ರವಾಹ ಹರಿಯುತ್ತದೆ, ನೀನು ಹೊಂದಿರುವ ಪ್ರತಿಯೊಂದು ಜ್ಞಾನಬಿಂದು ಮುಂದಿನ ನಿನ್ನ ಪೀಳಿಗೆಗೆ ಹರಿಯಬೇಕು. ಜ್ಞಾನ ಮತ್ತು ಅನುಭವ ನಿನ್ನ ಜೊತೆ ಸುಡುಲು ಬಾರದು— ಅದು ಮುಂದಿನ ಪೀಳಿಗೆಗೆ ಕೊಡುಗೆಯಾಗಿ ಹರಿಯಬೇಕು" ಮತ್ತು ಶ್ರೀ ಕೃಷ್ಣ ಮುಂದುವರೆಸಿದ,

ನೀನೇನಾದರೂ ನಿನ್ನ ಜ್ಞಾನ ಮತ್ತು ಅನುಭವವನ್ನು ಪ್ರಪಂಚಕ್ಕೆ ಕೊಡುಗೆಯಾಗಿ ನೀಡದೆ ಹೊರಟುಹೋದರೆ ಅದು ಪ್ರಪಂಚಕ್ಕೆ ತುಂಬಲಾರದ ನಷ್ಟವಾಗುತ್ತದೆ ಮತ್ತು ಅದು ಅಕ್ಷಮ್ಯ ಅಪರಾಧ. ಜ್ಞಾನ ಮತ್ತು ಅನುಭವಗಳು ಮನುಷ್ಯರ ಜೊತೆಗೆ ಹೂತುಹಾಕಲು ಅಥವಾ ಸುಟ್ಟು ಹಾಕುವುದಲ್ಲ. ಅದನ್ನು ನಮ್ಮ ಮುಂದಿನ ಪೀಳಿಗೆಯವರಿಗೆ ಕೊಡುಗೆಯಾಗಿ ನೀಡಬೇಕು.
ಶ್ರೀಕೃಷ್ಣನ ಮಾತುಗಳನ್ನು ಕೇಳಿ ಭೀಷ್ಮನು ಕಣ್ಣುಮುಚ್ಚಿದ. ಕಣ್ಣಲ್ಲಿ ನೀರು ತುಂಬಿತ್ತು, ಆದರೆ ಅದು ದೇಹದ ನೋವಿನ ನೀರಾಗಿರಲಿಲ್ಲ — ಸಂಪೂರ್ಣ ಶರಣಾಗತಿಯಿಂದ ಹೊರಬಂದ ನೀರಾಗಿತ್ತು . ಅವರಿಗೆ ತನ್ನ ಬದುಕಿನ ಧರ್ಮವೇ ಜ್ಞಾನವನ್ನು ಹಂಚುವುದು ಎಂಬ ಅರಿವಾಗಿತ್ತು.
ಅವರ ಛಿದ್ರವಾದ ದೇಹದ ನೋವು ಮಾಯವಾಗಿತ್ತು, ಜ್ಞಾನವನ್ನು ಹಂಚುವ ತನ್ನ ಕೊನೆಯ ಜೀವನದ ಕೊನೆಯ ಕರ್ತವ್ಯಕ್ಕೆ ದೇಹ ಅಣಿಯಾಯಿತು.
ಅಲ್ಲಿಂದ ಪ್ರಾರಂಭವಾಯಿತು ಭೀಷ್ಮ-ಪಾಂಡವರ ಅಮರ ಸಂವಾದ — ಧರ್ಮ, ಆಡಳಿತ, ಜೀವನದ ಆಳವಾದ ತತ್ವಗಳನ್ನು ಒಳಗೊಂಡ ಉಪದೇಶಗಳು. ಈ ಸಂವಾದವೇ ಮಹಾಭಾರತದ "ಮೋಕ್ಷಧರ್ಮ ಪರ್ವ".
👉 ಈ ಕಥೆ ನನ್ನ ಮನಸ್ಸನ್ನು ಆಳವಾಗಿ ಮುಟ್ಟಿತು. ಜೀವನ ಕ್ಷಣಿಕ, ಮತ್ತು ಅಸ್ಥಿರ ಎಂಬ ಅರಿವು ಮೂಡಿತು. ನಮ್ಮೊಳಗೆ ಇರುವ ಜ್ಞಾನವನ್ನು ಹಂಚದೆ ಹೋದರೆ, ನಮ್ಮ ಜೀವನ ವ್ಯರ್ಥ ಮತ್ತು ಅದು ಅಪರಾಧ ಎಂದು ಅನ್ನಿಸಿತು. ಆಗಿನಿಂದ, ನಾನು ಬರೆಯಲು ಪ್ರಾರಂಭಿಸಿದೆ. ನನ್ನ ಸೀಮಿತ ಜ್ಞಾನ, ಮಡುಗಟ್ಟಿದ ನೋವು ಮತ್ತು ಅನುಭವಗಳನ್ನು ಹಂಚುವ ಸಣ್ಣ ಪ್ರಯತ್ನ ಇದಾಗಿದೆ. ನನ್ನ ಜೊತೆಯೇ ನಾನು ಪಡೆದ ದೇವರು ಅವಕಾಶ ಮಾಡಿಕೊಟ್ಟ ಈ ಜ್ಞಾನ ಮಾಯವಾಗುವುದಿಲ್ಲ ಎಂಬ ನಂಬಿಕೆ.
ನಾನು ಭೀಷ್ಮರಂತಹ ಪ್ರಖಾಂಡ ಪಂಡಿತನೂ ಅಲ್ಲ ಮಹಾಜ್ಞಾನಿಯಂತೂ ಅಲ್ಲವೇ ಅಲ್ಲ, ಮತ್ತು ಜಗತ್ತು ನನ್ನ ಮಾತುಗಳಿಗಾಗಿ ಎಂದೂ ಕಾಯುತ್ತಿದೆ ಎಂಬ ಅಹಂ ಕೂಡ ಇಲ್ಲ. ಆದರೆ ನಾನು ಕಲಿತ, ಅನುಭವಿಸಿದ, ಗಮನಿಸಿದ ಅಂಶಗಳನ್ನು ಹಂಚದೇ ಇರಬಾರದು ಎಂದುಕೊಂಡೆ. ಅದೇ ನನ್ನ ಸಣ್ಣ ಪ್ರಯತ್ನ — avyaktaha.com ಬ್ಲಾಗ್ ಮತ್ತು ಲಿಂಕ್ಡಿನ್ ಬರಹಗಳು.

