ಮೀನು ಮಾತಾಡಿದಾಗ -
ನಾನು ಆ ಆಟಿಕೆಯನ್ನು ತಿಂಗಳುಗಳಿಂದ ಮುಟ್ಟಿರಲಿಲ್ಲ.
ಅದು ಇನ್ನೂ ಬಾತ್ರೂಮ್ ಶೆಲ್ಫ್ ಅಂಚಿನಲ್ಲಿ ನಿಶ್ಯಬ್ದವಾಗಿ ಕುಳಿತಿತ್ತು —
ಬಾಯಿ ಬಳಿ ಸಣ್ಣ ರಂಧ್ರವಿರುವ ರಬ್ಬರ್ ಮೀನು. ಒಮ್ಮೆ ಮೃದುವಾಗಿತ್ತು,
ಖುಷಿ ಮತ್ತು ಜೀವಂತಿಕೆಯಿಂದ ತುಂಬಿತ್ತು. ಆದರೆ ಈಗ ಸೊರಗಿತ್ತು.
ನಿಶ್ಚಲ ಕಾಲದೊಂದಿಗೆ ಸ್ವಲ್ಪ ಗಡುಸಾಗಿತ್ತು.

ಇಂದು, ತಕ್ಷಣ ನಾನು ಅದನ್ನು ತೆಗೆದೆ.
ಸ್ವಲ್ಪ ನಿಧಾನವಾಗಿ ಹಿಸುಕಿದೆ. ನೀರಿಲ್ಲ. ಬರೀ ಗಾಳಿ.
ಆ ಮೌನದಲ್ಲಿ, ಏನೋ ವಿಚಿತ್ರವಾದ ಸಂಗತಿ ಘಟಿಸಿತ್ತು.
"ಅವಳು ಬರುವಳಾ?"
- ಧ್ವನಿ ಮೀನಿನ ಮಾತಲ್ಲ. ಆದರೆ ಅದು ನನ್ನ ಹೃದಯದಲ್ಲಿ ಸ್ಪಷ್ಟವಾಗಿ ಅನುರಣಿಸಿತು.
ಮೀನು ಮಾತನಾಡಿತು — ಅಥವಾ ಬಹುಶಃ ನನ್ನೊಳಗಿನ ಭಾವನೆ ಮಾತನಾಡಿಸಿತು.
"ಇಲ್ಲ..," ನಾನು ಪಿಸುಗುಟ್ಟಿದೆ.
"ಅವಳು ಯಾವಾಗಲೂ ಬರುತ್ತಿದ್ದಳು." - ಮೀನು
"ಹೌದು.. ನಾವು ಬಕೆಟ್ ನೀರ ತುಂಬಿಸಿ, ನೆಲದ ಮೇಲೆ ಕುಳಿತು, ಸಮಯವೆಂಬುದೇ ಇಲ್ಲದಂತೆ ನಿನ್ನೊಂದಿಗೆ ಆಡುತ್ತಿದ್ದೆವು." - ನಾನು
"ನಾನು ಅವಳ ಮುಖಕ್ಕೆ ನೀರು ಚಿಮ್ಮಿದಾಗ ಅವಳು ನಗುತ್ತಿದ್ದಳು." - ಮೀನು
ನಾನು ನಕ್ಕೆ. ಆ ನಗು...
ಅದು ಕೋಣೆಯನ್ನು ತುಂಬಿಸುತ್ತಿರಲಿಲ್ಲ —
ಅದು ನನ್ನೊಳಗೆಂತಹುದೋ ನೆನಪುಗಳೆಂಬ ಭಾವನೆಗಳ ಕಾರಂಜಿಯನ್ನು ಹೊಮ್ಮಿಸಿತ್ತು.
ಈಗ ಖಾಲಿಯಾಗಿರುವುದು ಮೀನಿನ ನೀರು.
"ಅವಳು ಈಗ ಯಾಕೆ ಬರುವುದಿಲ್ಲ?" - ಮೀನು
ನಾನು ಅದನ್ನು ನೋಡುತ್ತಾ ನಿಂತೆ. ಮೀನಿನ ಆಟಿಕೆ ಕೈಯಲ್ಲಿ.
ನಾನು ಸಮಯವನ್ನು, ಪರಿಸ್ಥಿತಿಗಳನ್ನು, ಜೀವನವನ್ನು ದೂಷಿಸಬಹುದಿತ್ತು.
ಆದರೆ ಸತ್ಯ ಹೆಚ್ಚು ಜಟಿಲವಾಗಿತ್ತು — ಮತ್ತು ಹೆಚ್ಚು ಮೌನವಾಗಿತ್ತು.
"ಅವಳು ಬೆಳೆಯುತ್ತಿದ್ದಾಳೆ. ಮತ್ತು... ಜೀವನವು ಈಗ ಬೇರೆಯಾಗಿದೆ. ನಾನು ಅವಳನ್ನು ಹಿಂದಿನಂತೆ ನೋಡುವ ಅವಕಾಶವಿಲ್ಲ." -ನಾನು
"ಆದರೆ ನಾನು ಅವಳ ಪ್ರಪಂಚದ ಭಾಗವಾಗಿದ್ದೆ." - ಮೀನು
"ನೀನಿದ್ದೆ. ನೀನು ಸಂತೋಷವಾಗಿದ್ದೆ. ನೀನು ನೀರಿನ ಮತ್ತು ಆಶ್ಚರ್ಯದ ಹೂರಣವಾಗಿದ್ದೆ." -ನಾನು
ಮೀನು ಭಾರವಾಗಿ ಅನಿಸಿತು.
ಅಥವಾ ನಾನು ಸಣ್ಣವನಾಗಿ ಅನಿಸಿತು —
ಶೆಲ್ಫಿನ ಮರೆತ ಮೂಲೆಯಲ್ಲಿ ಸಣ್ಣದಾಗಿ ಕುಗ್ಗಿದಂತೆ ಭಾಸವವಾಗಿತ್ತು.
ನಾನು ಮೀನನ್ನು ನೀರಿನ ಬಟ್ಟಲಿಗೆ ಮುಳುಗಿಸಿದೆ.
ಅದನ್ನು ಶುದ್ಧಗೊಳಿಸಬೇಕೆಂದು ಅಲ್ಲ -
ಕೇವಲ ಅದು ನೆನಪಿಸಿಕೊಳ್ಳುವಂತೆ, ಸಂಪರ್ಕ ಹೊಂದುವಂತೆ, ಒಂದು ಕ್ಷಣಕ್ಕಾದರೂ ಜೀವಂತವಾಗಿರುವಂತೆ ಮಾಡಲು.
"ನೀನು ಅವಳನ್ನು ಮಿಸ್ ಮಾಡಿಕೊಳ್ಳುತ್ತಿದ್ದೀಯಾ?" -ಮೀನು
ನಾನು ಅದಕ್ಕೆ ಉತ್ತರ ಕೊಡಬೇಕು ಅನ್ನಿಸಲಿಲ್ಲ
ಕೆಲವು ಸತ್ಯಗಳು ಅಂತರ್ಯಕ್ಕೆ ತುಂಬಾ ಹತ್ತಿರವಾಗಿರುತ್ತವೆ.
ಆದರೆ ಒಳಗೆ, ಅನುರಣಿಸಿತ್ತು: "ಮಾತುಗಳು ಸಾಲದು." Words fall short.
ನಾನು ಸ್ವಲ್ಪ ಹೊತ್ತು ಮೀನಿನೊಂದಿಗೆ ಕುಳಿತೆ.
ಅಲ್ಲಿ ನೀರಿನ ಚಿಮ್ಮುವಿಕೆ ಇಲ್ಲ. ನಗುವಿನ ಶಬ್ದ ಇಲ್ಲ. ಕೇವಲ ಮೌನ.
ಆಗ ನನಗೆ ಅರಿವಾಯಿತು —
ನಾವು ಕಳೆದುಕೊಳ್ಳುವ ಪ್ರತಿಯೊಂದೂ ಕಳೆದುಹೋಗುವುದಿಲ್ಲ.
ಕೆಲವು ವಿಷಯಗಳು... ಹೃದಯದಲ್ಲಿಯೇ ಉಳಿಯುತ್ತವೆ. ಪಾತ್ರೆಗಳನ್ನು ತೊಳೆದರೂ ವಾಸನೆ ಹಾಗೆ ಉಳಿಯುವ ಹಾಗೆ!
ಕಾಯುತ್ತವೆ. ಪ್ರಪಂಚ ಬದಲಾಗುವುದಕ್ಕಲ್ಲ —
ನಾವು ಬದಲಾಗುವುದಕ್ಕೆ.
ನಾವು ಯಾವಾಗಲೂ ಜನರನ್ನು ಕಳೆದುಕೊಳ್ಳುವುದಿಲ್ಲ. ಆ ಕ್ಷಣದ ಸಂತೋಷದ ಅನುಭವಗಳನ್ನು.
ಏಕೆಂದರೆ ಸಂತೋಷವು ಚಂಚಲ, ಆಕಾರ ಬದಲಾಯಿಸುತ್ತದೆ, ಮತ್ತು ಅದನ್ನು ಹಿಡಿದಿಡುವುದು ಹೃದಯಕ್ಕೆ ತಿಳಿಯದು.
ನಾನು ಎದ್ದು ಹೋಗುವಾಗ, ಮೀನಿನ ಬಾಯಿಯಿಂದ ಒಂದು ಸಣ್ಣ ನೀರಿನ ತೊಟ್ಟು ಹೊರಬಂದಿತ್ತು —
ಮೃದುವಾಗಿ, ನಿಧಾನವಾಗಿ, ಉಸಿರು ತನ್ನನ್ನು ನೆನಪಿಸಿಕೊಳ್ಳುವಂತೆ.
"ಅವಳೂ ನಮ್ಮನ್ನು ಮಿಸ್ ಮಾಡಿಕೊಳ್ಳುತ್ತಿರುತ್ತಾಳೆ... ಎಂದು ನನಗೆ ಅನ್ನಿಸುತ್ತೆ"
ನಾನು ತಿರುಗಿ ನೋಡಲಿಲ್ಲ.
ನನಗೆ ಅದು ಅಗತ್ಯವಿರಲಿಲ್ಲ ಎಲ್ಲಿರುವಳೋ ಅಲ್ಲಿ ಸುಖವಾಗಿರಬಹುದೆಂಬ ಭಾವನೆಯಿಂದ.
ನಾನು ನಕ್ಕೆ.
ಮತ್ತು ಆ ಸಣ್ಣ, ಕ್ಷಣಿಕ ನಗುವಿನಲ್ಲಿ —
ಮತ್ತೆ ಕಾರಂಜಿ ಹೊಮ್ಮಿತ್ತು.